151 ಮೀ ಉದ್ದದ ಕಂಬಳ ಕರೆಗೆ ಭರದ ಸಿದ್ಧತೆ – ಹೊಸ ದಾಖಲೆ ಬರೆಯಲಿರುವ ಬೆಂಗಳೂರು ಕಂಬಳ

ಮಂಗಳೂರು(ಬೆಂಗಳೂರು): ಬೆಂಗಳೂರು ಕಂಬಳಕ್ಕೆ ದಿನಗಣನೆ ಆರಂಭಗೊಂಡಿದ್ದು 28 ದಿನಗಳಷ್ಟೇ ಬಾಕಿ ಉಳಿದಿದೆ. ಅರಮನೆ ಮೈದಾನದಲ್ಲಿ ಕಂಬಳಕ್ಕಾಗಿ ಭರದ ಸಿದ್ದತೆ ನಡೆಯುತ್ತಿದೆ. ಕಂಬಳ ಕರೆಯ ಕಾಮಗಾರಿ ಏರುಗತಿಯಲ್ಲಿ ನಡೆಯುತ್ತಿದ್ದು, ಈ ಕರೆಯ ಮೂಲಕ ಬೆಂಗಳೂರು ಕಂಬಳ ಹೊಸ ದಾಖಲೆ ಬರೆಯಲು ಸಿದ್ಧತೆ ನಡೆಸಿದೆ.

ಬೆಂಗಳೂರು ಕಂಬಳ ಕರೆ ಸುಮಾರು 151 ಮೀ ಉದ್ದವಾಗಿದ್ದು ಇದು ಇದುವರೆಗಿನ ಕಂಬಳ ಕರೆಗಳ ಪೈಕಿ ಅತೀ ಉದ್ದದ ಕಂಬಳ ಕರೆ ಎನ್ನಲಾಗಿದೆ. ಇದುವರೆಗೆ ಕಂಬಳ ನಡೆಯುತ್ತಿದ್ದ ಅಷ್ಟೂ ಕರೆಗಳ ಪೈಕಿ ಪುತ್ತೂರು ಕೋಟಿ ಚೆನ್ನಯ ಕಂಬಳದ ಕರೆ 149 ಮೀ ಉದ್ದವಿದ್ದು, ಅತೀ ಉದ್ದದ ಕಂಬಳ ಕರೆ ಎಂಬ ಪ್ರಖ್ಯಾತಿ ಪಡೆದಿತ್ತು. ಆದರೆ ಇನ್ನು ಈ ಖ್ಯಾತಿ ಬೆಂಗಳೂರು ಕಂಬಳ ಕರೆಯ ಪಾಲಾಗಲಿದೆ. 50 ವರ್ಷ ಪೂರ್ಣಗೊಳಿಸಿ ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿರುವ ಬೆಂಗಳೂರು ತುಳುಕೂಟ ಈ ಚಾರಿತ್ರಿಕ   ಕ್ಷಣವನ್ನು ಅಜರಾಮರಗೊಳಿಸಬೇಕೆಂಬ ಸದುದ್ದೇಶದಿಂದ ಬೆಂಗಳೂರು ಕಂಬಳವನ್ನು ಆಯೋಜಿಸಿದ್ದು ದಾಖಲೆಯ ಕಂಬಳದ ಕರೆ ನಿರ್ಮಾಣ ಮಾಡಲಾಗುತ್ತಿದೆ ಎಂದು ತುಳುಕೂಟದ ಅಧ್ಯಕ್ಷ ಸುಂದರ್ ರಾಜ್ ರೈ ಮಾಧ್ಯಮಗಳಿಗೆ ತಿಳಿಸಿದ್ದಾರೆ.

‌ಬೆಂಗಳೂರು ಕಂಬಳ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸಾರಥ್ಯದಲ್ಲಿ ಬೆಂಗಳೂರು ಕಂಬಳ ನಮ್ಮ ಕಂಬಳ ಎಂಬ ಟ್ಯಾಗ್ ಲೈನ್ ನೊಂದಿಗೆ ನವೆಂಬರ್ 25, 26ರಂದು ನಡೆಯಲಿದ್ದು, ಗೌರವಾಧ್ಯಕ್ಷರಾಗಿರುವ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಉದ್ಯಮಿ ಪ್ರಕಾಶ್ ಶೆಟ್ಟಿ, ಗಾಯಕ, ಸಂಗೀತ ನಿರ್ದೇಶಕ ಗುರುಕಿರಣ್, ಉದ್ಯಮಿ ಗುಣರಂಜನ್ ಶೆಟ್ಟಿ ನೇತೃತ್ವದಲ್ಲಿ ಸಿದ್ದತೆ ನಡೆಯುತ್ತಿದೆ. ಕಂಬಳದಲ್ಲಿ ಹಲವು ಸಿನಿಮಾ ನಟ ನಟಿಯರು, ಕ್ರೀಡಾಪಟುಗಳು, ರಾಜಕಾರಣಿಗಳು ಭಾಗವಹಿಸಲಿದ್ದಾರೆ. ಬೆಂಗಳೂರು ಕಂಬಳದ ಕುರಿತಂತೆ ಸಾರ್ವಜನಿಕರ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here