2 ಸಾವಿರಕ್ಕೆ ಒಂದು ಲೋಡ್ ಮರಳು ನೀಡುವ ಬಿಜೆಪಿ ರಾಜ್ಯಾಧ್ಯಕ್ಷರ ಆಶ್ವಾಸನೆ ಏನಾಯಿತು?-ವಿಧಾನ ಪರಿಷತ್‌ ಸದಸ್ಯ ಹರೀಶ್ ಕುಮಾರ್ ಪ್ರಶ್ನೆ

ಮಂಗಳೂರು: ರಸ್ತೆ ಅಭಿವೃದ್ಧಿ, ಚರಂಡಿ ಬಗ್ಗೆ ಮಾತನಾಡಬೇಡಿ, ಹಿಂದುತ್ವ, ಲವ್ ಜಿಹಾದ್ ಬಗ್ಗೆ ಮಾತನಾಡಿ ಎನ್ನುವವರ ಬಾಯಲ್ಲಿ ಈಗ ಅಭಿವೃದ್ಧಿ ಮಾತುಗಳು ಬರಲಾರಂಭಿಸಿವೆ. ಜಿಲ್ಲೆಯಲ್ಲಿ ಮರಳಿನ ಸಮಸ್ಯೆಗೆ ಉಂಟಾಗಲು ಬಿಜೆಪಿಯ ದುರಾಡಳಿತ ಹಾಗೂ ಮರಳು ನೀತಿಯೇ ಕಾರಣ. ಈ ಸಮಸ್ಯೆಗೆ ಕಾಂಗ್ರೆಸ್ ಸರಕಾರ ಕಾರಣವಲ್ಲ. ಕರೆ ಮಾಡಿದರೆ ಸಾಕು, 2 ಸಾವಿರಕ್ಕೆ ಒಂದು ಲೋಡ್ ಮರಳು ಮನೆ ಬಾಗಿಲಿಗೆ ಬಂದು ತಲುಪಲಿದೆ ಎಂದು ಬಿಜೆಪಿ ನಾಯಕರು ಆಶ್ವಾಸನೆ ನೀಡಿದ್ದು ಹುಸಿಯಾಗಿದೆ.  ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಇನ್ನೊಬ್ಬರ ಬಗ್ಗೆ ಗೂಬೆ ಕುರಿಸುವ ಕೆಲಸವನ್ನು ನಿಲ್ಲಿಸಿ ಬಿಜೆಪಿ ಸರಕಾರದ ಅವಧಿಯಲ್ಲಿ ಮರಳು ಸಮಸ್ಯೆಗೆ ಯಾವ ಕ್ರಮ ಕೈಗೊಂಡಿದ್ದರು ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ. ಯು.ಟಿ. ಖಾದರ್ ಸಚಿವರಾಗಿದ್ದಾಗ ಸ್ಯಾಂಡ್ ಬಜಾರ್ ಆ್ಯಪ್ ಮಾಡಿ ಕಡಿಮೆ ಬೆಲೆಗೆ ಸೂಕ್ತ ಸಮಯದಲ್ಲಿ ಮರಳು ಸಿಗುವ ವ್ಯವಸ್ಥೆ ಮಾಡಿದ್ದರು. ಈ ವ್ಯವಸ್ಥೆಗೆ ಕಲ್ಲು ಹಾಕಿದವರು ಯಾರು ಎಂದು ಜನರಿಗೆ ತಿಳಿಸಬೇಕು ಎಂದು ಒತ್ತಾಯಿಸಿದರು. ಡ್ರೆಜ್ಜಿಂಗ್ ಮೂಲಕ ಸೇತುವೆ ಅಡಿಯಲ್ಲಿ ನಿರ್ಬಂಧಿತ ಪ್ರದೇಶದಲ್ಲಿ ಮರಳು ಗಣಿಗಾರಿಕೆ ನಡೆದಿದ್ದು ತಮ್ಮ ನಾಲ್ಕು ವರ್ಷಗಳ ಆಡಳಿತ ಅವಧಿಯಲ್ಲೇ ಎಂಬುದನ್ನು ಶಾಸಕ ವೇದವ್ಯಾಸ ಕಾಮತ್ ನೆನಪಿಸಿಕೊಳ್ಳಬೇಕು. ನಮ್ಮ ಸರಕಾರ ಆಡಳಿತಕ್ಕೆ ಬಂದು ನಾಲ್ಕು ತಿಂಗಳಷ್ಟೇ ಆಗಿದೆ. ಆಸ್ಕರ್ ಫರ್ನಾಂಡಿಸ್ ಕೇಂದ್ರ ಸಚಿವರಾಗಿದ್ದಾಗ ಸಿಆರ್‌ಜೆಡ್‌ ಅಡಿ ಕೆಲ ಮಾರ್ಪಾಡು ಮಾಡಿ ವ್ಯವಸ್ಥೆ ಮಾಡಿದ್ದರು. ಡಬಲ್ ಎಂಜಿನ್ ಸರಕಾರದಲ್ಲಿ ಈ ಕುರಿತು ಸರಿಪಡಿಸುವ ಅವಕಾಶವಿದ್ದರೂ ಅವರು ಪ್ರಯತ್ನ ಮಾಡಿಲ್ಲ. ಕನಿಷ್ಟ ಈ ಬಗ್ಗೆ ಒಂದು ಸಲವಾದರೂ ನಿಯೋಗ ಕೇಂದ್ರಕ್ಕೆ ಹೋಗಿ ಪ್ರಯತ್ನಿಸಿದೆಯೇ ಎಂದು ಪ್ರಶ್ನಿಸಿದರು.

ಬಿಜೆಪಿ ಆಡಳಿತದಲ್ಲಿ ಸ್ಮಾರ್ಟ್ ಸಿಟಿ ಅನುದಾನ ಬೇಕಾಬಿಟ್ಟಿ ಕಾಮಗಾರಿಗಳಿಗೆ ಬಳಕೆ ಮಾಡಲಾಗಿದೆ. ಆಸ್ಕರ್ ಫರ್ನಾಂಡಿಸ್ ಅವರು ಸಚಿವರಾಗಿದ್ದಾಗ ಶಿರಾಡಿ ಘಾಟ್ ಸುರಂಗ ಯೋಜನೆ ಡಿಪಿಆರ್ ಹಂತಕ್ಕೆ ಬಂದಿತ್ತು. ಬಿಜೆಪಿ ಅಧಿಕಾರಕ್ಕೆ ಬಂದು 10 ವರ್ಷ ಕಳೆದರೂ ಈ ಯೋಜನೆ ಎಲ್ಲಿಗೆ ಬಂತು ಎಂದು ಜನರಿಗೆ ತಿಳಿಸಬೇಕು ಎಂದರು. ನಿಮ್ಮ ಜವಾಬ್ದಾರಿಯನ್ನು ನಿಭಾಯಿಸದೆ ಕಾಂಗ್ರೆಸ್ ಮೇಲೆ ಗೂಬೆ ಕೂರಿಸಬೇಡಿ. ನಂತೂರು ಫ್ಲೈ ಓವರ್ ಯಾಕೆ ಇನ್ನೂ ಮಾಡಿಲ್ಲ, 10 ವರ್ಷಗಳ ಅವಧಿಯಲ್ಲಿ ಆದ ಪಂಪ್ ವೆಲ್ ಒಂದು ಮಳೆಗೆ ಈಜುಕೊಳ ಆಗಿದೆ. ಅದರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ನಿಮ್ಮ ಮೌನವು ಎಲ್ಲದಕ್ಕೂ ಸಾಕ್ಷಿ ಆಗಿದೆ. ಈ ಬಗ್ಗೆ ಉತ್ತರ ನೀಡಬೇಕು ಎಂದರು. ಗ್ಯಾರಂಟಿಗಳಿಂದ ಸರಕಾರ ದಿವಾಳಿ ಆಗುತ್ತದೆ ಎಂದವರು ಈಗ ಚತ್ತೀಸ್ ಗಡದಲ್ಲಿ ಮೋದಿ ಗ್ಯಾರಂಟಿ ನೀಡುತ್ತಿದ್ದಾರೆ. ಈ ಗ್ಯಾರಂಟಿಗಳಿಂದ ಸರಕಾರ ದಿವಾಳಿ ಆಗುವುದಿಲ್ಲವೇ? ರಾಜ್ಯದಲ್ಲಿನ ಬರ ಸಮೀಕ್ಷೆ ನಡೆಸಿ ಪರಿಹಾರ ನೀಡುವ ಬಗ್ಗೆ ಮೌನ ಆಗಿರುವ ಕೇಂದ್ರ ಸರಕಾರ ಗ್ಯಾರಂಟಿಗಳ ವಿಷಯದಲ್ಲಿ ಕಾಂಗ್ರೆಸ್ ಹಾದಿ ತುಳಿಯುತ್ತಿದೆ. ಬಿಜೆಪಿ ತಮ್ಮ ಆಡಳಿತದಲ್ಲಿ ಕಾಂಗ್ರೆಸ್ ಮಾಡಿದ ಯೋಜನೆಗಳಿಗೆ ಹೆಸರು ಬದಲಾಯಿಸಿರುವುದೇ  ಮಾಡಿರುವ ಸಾಧನೆ ಎಂದರು.

ಸುರತ್ಕಲ್ ಟೋಲ್ ಮತ್ತೆ ಆರಂಭ ಆಗುವ ಸುದ್ದಿ ಇದೆ. ಅದು ಆರಂಭ ಆಗುವುದಾ ಇಲ್ಲವಾ ಎಂದು ಮೊದಲು ಸ್ಪಷ್ಟಪಡಿಸಿ, ಹೋರಾಟದ ಮೂಲಕ ಬಂದ್ ಆಗಿದ್ದು, ಈಗ ನಿಜ ವಿಷಯವನ್ನು ಜನರ ಮುಂದೆ ಇಡಬೇಕು. ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡುತ್ತಿಲ್ಲ ಎಂದು ಬಿಜೆಪಿ ಶಾಸಕರು ದೂರಿದ್ದಾರೆ. ಆದರೆ, ಚುನಾವಣಾ ಪೂರ್ವದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ರಸ್ತೆ, ಚರಂಡಿ ಅಭಿವೃದ್ಧಿ ಬಗ್ಗೆ ಮಾತನಾಡಬೇಡಿ ಎಂದು ಹೇಳಿದ್ದಾರೆ. ಈಗ ಯಾವ ಕಾರಣಕ್ಕಾಗಿ ಬಿಜೆಪಿ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದೆ. ಮಂಜೂರಾತಿ ಇಲ್ಲದೆ ಕಾಮಗಾರಿ ಮಾಡಿಸಿ ಈಗ ಅನುದಾನ ಇಲ್ಲ ಎಂದು ಬೊಬ್ಬೆ ಹಾಕುತ್ತಿದ್ದಾರೆ. ಕಾಂಗ್ರೆಸ್ ಸರಕಾರ ಅನುದಾನ ನೀಡುವಲ್ಲಿ ತಾರತಮ್ಯ ಮಾಡಿಲ್ಲ, ತಾರತಮ್ಯ ಆರಂಭಿಸಿದ್ದೇ ಬಿಜೆಪಿ ಸರಕಾರ ಎಂದು ಆಕ್ರೋಶ ಹೊರಹಾಕಿದರು.

ಪದ್ಮನಾಭ ನರಿಂಗಾನ, ಟಿ.ಕೆ. ಸುಧೀರ್, ಗಣೇಶ್ ಪಜಾರಿ, ಅಬ್ದುಲ್ ಸಲೀಂ, ಶುಭೋದಯ ಆಳ್ವ, ಪ್ರಕಾಶ್ ಸಾಲ್ಯಾನ್, ಲಾರೆನ್ಸ್ ಡಿಸೋಜ, ಸುಭಾಷ ಶೆಟ್ಟಿ, ನೀರಜ್ ಪಾಲ್, ಯೋಗೇಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here