ಬಿಜೈ ರಾಜ ಕೊಲೆ ಪ್ರಕರಣ – ರವಿ ಪೂಜಾರಿ ಖುಲಾಸೆ – ಮಂಗಳೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು

ಮಂಗಳೂರು: ಭೂಗತ ಪಾತಕಿ ರವಿ ಪೂಜಾರಿಯ ವಿರುದ್ದ ದಾಖಲಾಗಿದ್ದ ಬಿಜೈ ರಾಜನ ಕೊಲೆ ಪ್ರಕರಣದಲ್ಲಿ ರವಿ ಪೂಜಾರಿಯನ್ನು ಖುಲಾಸೆಗೊಳಿಸಿ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

2021 ರಲ್ಲಿ ನಗರದ ಫಳ್ನೀರ್ ವೆಸ್ಟ್ ಗೇಟ್ ಟವರ್ಸ್ ಕಟ್ಟಡದಲ್ಲಿರುವ ನ್ಯಾಷನಲ್ ಮೆಡಿಕಲ್, ಕಾಯಿನ್ ಬೂತ್ ನ ಬಳಿ ರವಿಪೂಜಾರಿ ಒಳಸಂಚು ನಡೆಸಿ ರವಿಪೂಜಾರಿಯ ಸಹಚರರು ಶೈಲೇಶ್ ರಾಜ ಯಾನೆ ಬಿಜೈ ರಾಜನನ್ನು ತಲವಾರಿನಿಂದ ಕಡಿದು ಗಂಭೀರವಾಗಿ ಗಾಯಗೊಳಿಸಿ ಕೊಲೆ ಮಾಡಿದ್ದು, ರವಿ ಪೂಜಾರಿ ಮತ್ತು ಆತನ ಸಹಚರರ ವಿರುದ್ದ ಮಂಗಳೂರು ನಗರದ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ರಿ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸಿ ರವಿ ಪೂಜಾರಿ ಮತ್ತು ಆತನ ಸಹಚರರ ವಿರುದ್ದ ದೋಷರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಘಟನೆ ನಡೆದ ಸಮಯ ರವಿಪೂಜಾರಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ತದ ನಂತರ 2021ನೇ ಇಸವಿಯಲ್ಲಿ ರವಿಪೂಜಾರಿಯನ್ನು ಸೆನೆಗಲ್‌ನಲ್ಲಿ ಬಂಧಿಸಿ, ಭಾರತಕ್ಕೆ ಹಸ್ತಾಂತರಿಸಲಾಗಿತ್ತು. ಭಾರತಕ್ಕೆ ಹಸ್ತಾಂತರಿಸಿದ ನಂತರ ರವಿ ಪೂಜಾರಿ ವಿರುದ್ಧ ದಾಖಲಾದ ಎಲ್ಲಾ ಪ್ರಕರಣಗಳಲ್ಲಿ ಪೊಲೀಸರು ಹೆಚ್ಚುವರಿ ತನಿಖೆ ನಡೆಸಿ ಹೆಚ್ಚುವರಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ರವಿಪೂಜಾರಿ ವಿರುದ್ದ ದಾಖಲಾದ ಎರಡು ಪ್ರಕರಣಗಳಲ್ಲಿ ಮಾನ್ಯ ಪ್ರಿನ್ಸಿಪಾಲ್ ಸೀನಿಯರ್ ಸಿವಿಲ್ ಜಡ್ಜ್ ಹಾಗೂ ಮತ್ತೊಂದು ಪ್ರಕರಣದಲ್ಲಿ ಮಂಗಳೂರು ಜೆ.ಎಂ.ಎಫ಼್.ಸಿ. ನ್ಯಾಯಾಲಯ, ಸೇರಿ ಒಟ್ಟು 4 ಪ್ರಕರಣಗಳಲ್ಲಿ ರವಿಪೂಜಾರಿಯನ್ನು ಖುಲಾಸೆಗೊಳಿಸಿ ತೀರ್ಪು ನೀಡಲಾಗಿದೆ. ಬಿಜೈ ರಾಜಾ ಕೊಲೆ ಪ್ರಕರಣಗಳಲ್ಲಿ ವಿಚಾರಣೆ ನಡೆಸಿದ ಗೌರವಾನ್ವಿತ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ರವಿ ಪೂಜಾರಿಯನ್ನು ಖುಲಾಸೆ ಗೊಳಿಸಿ ತೀರ್ಪು ನೀಡಿದ್ದಾರೆ. ರವಿಪೂಜಾರಿಯ ವಿರುದ್ದ ಇನ್ನೂ ಹಲವು ಪ್ರಕರಣಗಳು ಮಂಗಳೂರು ಹಾಗೂ ಬೆಂಗಳೂರಿನಲ್ಲಿ ತನಿಖೆಗೆ ಬಾಕಿ ಇರುತ್ತದೆ. ರವಿಪೂಜಾರಿ ಪರವಾಗಿ ಮಂಗಳೂರಿನ ನ್ಯಾಯವಾದಿಗಳಾದ ಬಿ. ಅರುಣ್ ಬಂಗೇರ ಮತ್ತು ರಿಹಾನಾ ಪರ್ವೀನ್ ವಾದಿಸಿದ್ದರು.

LEAVE A REPLY

Please enter your comment!
Please enter your name here