ಮಂಗಳೂರು(ನವದೆಹಲಿ): ಚೀನಾದಲ್ಲಿ ಉಸಿರಾಟ ಸಂಬಂಧಿ ಅನಾರೋಗ್ಯ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಅಂತಹ ಪರಿಸ್ಥಿತಿ ಎದುರಾದರೆ ಅದನ್ನು ನಿರ್ವಹಿಸುವ ನಿಟ್ಟಿನಲ್ಲಿ ಚಿಕಿತ್ಸೆಗೆ ಬೇಕಾದ ತಯಾರಿ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರದ ಆರೋಗ್ಯ ಸಚಿವಾಲಯ ಮುಂದಾಗಿದೆ ಎಂದು ಎಎನ್‌ಐ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಸನ್ನದ್ಧತೆಯ ಕ್ರಮಗಳನ್ನು ತಕ್ಷಣವೇ ಪರಿಶೀಲಿಸಬೇಕು ಎಂದು ಅದು ಸಲಹೆ ನೀಡಿದೆ. ದೇಶವು ಕೋವಿಡ್‌ನಿಂದ ಬಳಲಿರುವ ಹಿನ್ನೆಲೆಯಲ್ಲಿ ಅದನ್ನು ಗಮನದಲ್ಲಿಟ್ಟುಕೊಂಡು ಪರಿಷ್ಕೃತ ಕಾರ್ಯಾಚರಣೆಯ ಮಾರ್ಗಸೂಚಿಗಳನ್ನು ಜಾರಿಗೆ ತರಬೇಕು ಎಂದು ತಿಳಿಸಲಾಗಿದೆ. ಶೀತ ಜ್ವರ, ಉಸಿರಾಟ ಸಮಸ್ಯೆಗಳ ಬಗ್ಗೆ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ನಿಕಟವಾಗಿ ಮೇಲ್ವಿಚಾರಣೆ ಮಾಡಬೇಕು. ಮೈಕೋಪ್ಲಾಸ್ಮಾ ನ್ಯುಮೋನಿಯಾ, ಕೋವಿಡ್ ಸೋಂಕಿನಿಂದ ಬಳಲಿದವರಲ್ಲಿ ಉಸಿರಾಟದ ಕಾಯಿಲೆಗಳು ಹೆಚ್ಚಾಗಿದ್ದು, ಆರೋಗ್ಯ ಸಚಿವಾಲಯವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಜನರು ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಅದು ಪ್ರಕಟಣೆಯಲ್ಲಿ ತಿಳಿಸಿದೆ.
ಈ ಮಧ್ಯೆ, ಚೀನಾದಲ್ಲಿ ಭಿನ್ನ ಅಥವಾ ಹೊಸತಾದ ರೋಗಕಾರಕ ವೈರಾಣು ಪತ್ತೆಯಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಘಟನೆಗೆ ಚೀನಾ ತಿಳಿಸಿದೆ. ಕೋವಿಡ್–19 ನಿರ್ಬಂಧಗಳನ್ನು ಸಡಿಲಿಸಿದ ನಂತರದ ಪ್ರಥಮ ಚಳಿಗಾಲ ಪ್ರವೇಶಿಸಿದ ಹಿಂದೆಯೇ ಮಕ್ಕಳಲ್ಲಿ ಉಸಿರಾಟದ ಸಮಸ್ಯೆಗಳು ಏರಿಕೆಯಾಗಿವೆ. ಮುಖ್ಯವಾಗಿ ಬೀಜಿಂಗ್, ಲಯೊನಿಂಗ್ ಪ್ರಾಂತ್ಯದಲ್ಲಿ ತೀವ್ರವಾಗಿದ್ದು, ಆಸ್ಪತ್ರೆಗಳಲ್ಲಿ ರೋಗಿಗಳ ದಟ್ಟನೆ ಹೆಚ್ಚಿದೆ.