ಮಂಗಳೂರು(ತಿರುವನಂತಪುರಂ): ಅಯ್ಯಪ್ಪನ ಪ್ರಸಿದ್ಧ ಹಿಂದೂ ದೇವಾಲಯವಾದ ಶಬರಿಮಲೆ ದೇಗುಲಕ್ಕೆ ದೇಶದ ವಿವಿಧೆಡೆಯಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಮೂಲಭೂತ ಸೌಕರ್ಯಗಳು ಮತ್ತು ಸುರಕ್ಷತಾ ಕ್ರಮಗಳ ಕೊರತೆಯ ಬಗ್ಗೆ ಯಾತ್ರಾರ್ಥಿಗಳು ದೂರಿದ್ದಾರೆ.
ಭಕ್ತರು ಈ ಬಾರಿ ತೀವ್ರ ಸಮಸ್ಯೆ ಮತ್ತು ಕಿರಿಕಿರಿ ಅನುಭವಿಸಿದ್ದು, ಹಿಂದೆಂದೂ ಕಾಣದಷ್ಟು ಜನಸಂದಣಿ ಈ ವರ್ಷ ಕಂಡುಬಂದಿದೆ. ನೂಕುನುಗ್ಗಲಿನಲ್ಲಿ ದರ್ಶನವೇ ಸಾಧ್ಯವಾಗಲಿಲ್ಲ ಎಂದು ಸಾವಿರಾರು ಭಕ್ತರು ದೂರಿದ್ದಾರೆ. ದೇಗುಲಕ್ಕೆ ಆಗಮಿಸುವ ಶಬರಿಮಲೆ ಯಾತ್ರಾರ್ಥಿಗಳಿಗೆ ಅನುಕೂಲ, ವಾಹನಗಳಿಗೆ ಸಾಕಷ್ಟು ಪಾರ್ಕಿಂಗ್ ಸೌಲಭ್ಯ ಮತ್ತು ಶುಚಿತ್ವವನ್ನು ಕಾಪಾಡಿಕೊಳ್ಳುವಂತೆ ಕೇರಳ ಹೈಕೋರ್ಟ್ ಡಿ.12ರಂದು ಅಧಿಕಾರಿಗಳಿಗೆ ಸೂಚಿಸಿದೆ. ನ್ಯಾಯಮೂರ್ತಿ ಅನಿಲ್ ನರೇಂದ್ರನ್ ಮತ್ತು ಜಿ. ಗಿರೀಶ್ ಅವರ ಪೀಠ, ಶಬರಿಮಲೆ ದೇಗುಲದ ನೂಕು ನುಗ್ಗಲು ನಿಯಂತ್ರಿಸಲು ರಾಜ್ಯ ಪೊಲೀಸರಿಗೆ ಆದೇಶಿಸಿದೆ.