ಮಂಗಳೂರು(ಕಾರ್ಕಳ): ಕಾರ್ಕಳದ ಬೈಲೂರಿನಲ್ಲಿ ನಿರ್ಮಿಸಿದ್ದ ಪರಶುರಾಮ ಥೀಮ್ ಪಾರ್ಕ್ ಹಗರಣದ ಬಗ್ಗೆ ಸಿಐಡಿ ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ. ಪರಶುರಾಮ ಥೀಮ್ ಪಾರ್ಕ್ ಮೋಸದ ವಿಚಾರವಾಗಿ ಅನೇಕ ಹೋರಾಟಗಳು ಪ್ರತಿಭಟನೆಗಳು ನಡೆದಿದ್ದವು. ಇತ್ತೀಚೆಗೆ ಈ ವಿಚಾರದ ಬಗ್ಗೆ ಕಾರ್ಕಳ ಕಾಂಗ್ರೆಸ್ ನ ಕಾರ್ಯಕರ್ತರು ಹಾಗೂ ಇತರ ಹಲವು ಸಾಮಾಜಿಕ ಕಾರ್ಯಕರ್ತರು ಮತ್ತೆ ಈ ಹಗರಣದ ಬಗ್ಗೆ ದ್ವನಿ ಎತ್ತಿದ್ದರು. ಇದರ ಬೆನ್ನಲ್ಲೇ ಸಿಎಂ ಸಿಐಡಿ ತನಿಖೆಗೆ ಆದೇಶ ನೀಡಿದ್ದಾರೆ.
ಪರಶುರಾಮ ಥೀಮ್ ಪಾರ್ಕ್ ಒಟ್ಟಾರೆ 11.54 ಕೋಟಿ ರೂಗಳ ಯೋಜನೆಯಾಗಿದ್ದು ಅದರಲ್ಲಿ 5 ಕೋಟಿ ರೂ ವೆಚ್ಚದಲ್ಲಿ ಪರಶುರಾಮ ನ ಕಂಚಿನ ಮೂರ್ತಿ ಪ್ರತಿಷ್ಠಾಪನೆ ಮಾಡುವುದೆಂದು ನಿರ್ಧಾರ ಆಗಿತ್ತು. ಕೆಂಗೇರಿಯ ಪ್ರತಿಮೆ ತಯಾರಿ ಸಂಸ್ಥೆಯೊಂದಕ್ಕೆ ಇದರ ಕಾಂಟ್ರಾಕ್ಟ್ ನೀಡಲಾಗಿತ್ತು. ರಾಜ್ಯ ಚುನಾವಣೆ ಹೊಸ್ತಿಲಲ್ಲಿ ಅಂದಿನ ಬಿಜೆಪಿ ಸರ್ಕಾರ ತರಾತುರಿಯಲ್ಲಿ ಜನವರಿ 27ರಂದು ಥೀಮ್ ಪಾರ್ಕ್ ಉದ್ಘಾಟಿಸಿತ್ತು. ಅಲ್ಲಿ ನಿರ್ಮಿಸಲಾಗಿರುವ ಪರಶುರಾಮನ ಕಂಚಿನ ಪ್ರತಿಮೆಯ ಉದ್ದ 33 ಅಡಿ, ತೂಕ 15 ಟನ್ ಎಂದು ಪ್ರಚಾರ ಮಾಡಲಾಗಿತ್ತು. ಆದರೆ ಕಂಚಿನ ಪ್ರತಿಮೆ ಎಂದು ಪ್ರಚಾರ ಮಾಡಲಾಗಿದ್ದು, ಪ್ರತಿಮೆ ‘ಫೈಬರ್’ನಿಂದ ನಿರ್ಮಿಸಲ್ಪಟ್ಟಿದೆ ಎಂಬ ವಿಚಾರ ಬೆಳಕಿಗೆ ಬಂದಿತ್ತು. ಚುನಾವಣಾ ಫಲಿತಾಂಶದ ಬಳಿಕ ಪರಶುರಾಮನ ಪ್ರತಿಮೆಯನ್ನು ರಾತ್ರೋರಾತ್ರಿ ಮಾಯ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಈ ಬಗ್ಗೆ ಅನೇಕ ಪ್ರತಿಭಟನೆಗಳು ನಡೆದಿದ್ದವು.