ಮಂಗಳೂರು: ಎರಡು ಚಕ್ರದ ಸೈಕಲ್ ಸವಾರಿ ಮಾಡೋದೇ ಕಷ್ಟ. ಅಂತದ್ರಲ್ಲಿ ಒಂದು ಚಕ್ರದ ಸೈಕಲ್ ಮೂಲಕ ಕನ್ಯಾಕುಮಾರಿ ಯಿಂದ ಕಾಶ್ಮೀರದ ವರೆಗೆ ಪ್ರಯಾಣ ಅಂದ್ರೆ ನಂಬಲು ಸ್ವಲ್ಪ ಕಷ್ಟ. ಆದರೆ ಇದು ನೀವು ಅಂದುಕೊಂಡಂತಲ್ಲ. ಕೇರಳ ಮೂಲದ ಸನೀದ್ ಮತ್ತು ಅವರ ಸ್ನೇಹಿತರ ತಂಡ ಮಾಧಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದು, ಕನ್ಯಾಕುಮಾರಿಯಿಂದ ಕಾಶ್ಮೀರದ ಲೇಹ್ ಲಡಾಕ್ ಗೆ ಒಂದು ಚಕ್ರದ ಸೈಕಲ್ ಮೂಲಕ ಪ್ರಯಾಣ ಬೆಳೆಸಲು ಮುಂದಾಗಿದ್ದಾರೆ. ಈಗಾಗಲೇ ಕೇರಳದ ಕಾಸರಗೋಡಿನಿಂದ ಕನ್ಯಾಕುಮಾರಿಗೆ ಪ್ರಯಾಣಿಸಿ ಕನ್ಯಾಕುಮಾರಿಯಿಂದ ಮಂಗಳೂರಿಗೆ ಬಂದು ತಲುಪಿದ್ದಾರೆ.
ದೇಶಾದ್ಯಂತ ಮಾದಕ ಪದಾರ್ಥಗಳಿಗೆ ಯುವ ಜನತೆ ಬಲಿಯಾಗುತ್ತಿದ್ದು, ಇದರ ವಿರುದ್ಧದ ಹೋರಾಟಕ್ಕೆ ತನ್ನಿಂದಾದ ಕೊಡುಗೆ ನೀಡಬೇಕೆಂದು ಫ್ರಂಟ್ ವೀಲ್ ಸೈಕ್ಲಿಂಗ್ ಮೂಲಕ ಪ್ರಯಾಣ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕೆಂಬ ಕನಸು ಕಂಡಿದ್ದ ಮೂವರು ಸ್ನೇಹಿತರು ಎರಡು ತಿಂಗಳ ಅವಧಿಯಲ್ಲಿ 2 ಸಾವಿರ ಕಿ.ಮೀ ಪ್ರಯಾಣ ಬೆಳೆಸಿ ಮಂಗಳೂರು ತಲುಪಿದ್ದು ಕರಾವಳಿಯಲ್ಲಿ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಲಭ್ಯವಾಗಿದೆ.
ಮಂಗಳೂರಿಗೆ ಆಗಮಿಸಿದ ಈ ಯುವಕರ ತಂಡಕ್ಕೆ ಜರ್ಮನಿಯಿಂದ ಹದಿನೈದು ದೇಶ ಮಣ್ಣು ರಕ್ಷಿಸಿ ಎಂಬ ಘೋಷದೊಂದಿಗೆ ಭಾರತಕ್ಕೆ ಬಂದ ಯುವಕ ಜೊತೆಯಾಗಿದ್ದಾನೆ. ತಂಡದ ಉತ್ತಮ ಕಾರ್ಯವನ್ನು ಶ್ಲಾಘಿಸಿದ ಮಂಗಳೂರಿನ ಎಂ.ಎಸ್ ಸ್ಪೋರ್ಟ್ಸ್ ವೇರ್, ಹೋಪ್ ಫೌಂಡೇಶನ್, ಒಲಿಂಪಿಕ್ ಸ್ಪೋರ್ಟ್ಸ್, ಎಂ.ಎಸ್ ಸ್ಪೋರ್ಟ್ಸ್ ಸೇರಿದಂತೆ ಜಿಲ್ಲೆಯ ಹತ್ತು ಹಲವು ಸಂಘ ಸಂಸ್ಥೆಗಳು ತಂಡಕ್ಕೆ ಅದ್ದೂರಿ ಸ್ವಾಗತ ನೀಡಿ ಪ್ರೋತ್ಸಾಹಿಸಿದ್ದಾರೆ. ಮಾದಕ ವ್ಯಸನದ ವಿರುದ್ಧ ಜಾಗೃತಿಗಾಗಿ ಸಾನಿಧ್ ಮತ್ತವರ ಸ್ನೇಹಿತರು ಕೈಗೊಂಡ ಫ್ರಂಟ್ ವೀಲ್ ಸೈಕ್ಲಿಂಗ್ ಯಾತ್ರೆ ಯಶಸ್ವಿಯಾಲಿ ಎನ್ನುವುದು ನಮ್ಮ ಹಾರೈಕೆ…