ರಾಜ್ಯಸಭಾ ಚುನಾವಣೆ-ಅಡ್ಡಮತ ಚಲಾಯಿಸಿದ ಬಿಜೆಪಿ ಶಾಸಕ ಎಸ್.ಟಿ‌. ಸೋಮಶೇಖರ್

ಮಂಗಳೂರು(ಬೆಂಗಳೂರು): ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ್ದಾರೆ.

ಸೋಮಶೇಖರ್ ಅಡ್ಡ ಮತ ಚಲಾಯಿಸಿರುವುದಾಗಿ ಬಿಜೆಪಿಯ ಚುನಾವಣಾ ಏಜೆಂಟರೊಬ್ಬರು ಖಚಿತಪಡಿಸಿದ್ದು, ‘ರಾಜ್ಯಸಭಾ ಚುನಾವಣೆಯಲ್ಲಿ ಆತ್ಮಸಾಕ್ಷಿಯ ಮತ ಹಾಕಿದ್ದೇನೆ’ ಎಂದು ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಂಗಳವಾರ ಮತ ಚಲಾಯಿಸಿದ ಬಳಿಕ‌ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಆತ್ಮಸಾಕ್ಷಿಯಂತೆ ಮತ ಚಲಾಯಿಸಿ, ಮತ ಪತ್ರವನ್ನು ಚುನಾವಣಾ ಏಜೆಂಟ್ ಗೆ ತೋರಿಸಿದ್ದೇನೆ’ ಎಂದರು. ಸೋಮಶೇಖರ್ ಅವರು ಅಡ್ಡ ಮತದಾನದ ಕುರಿತು ಸ್ಪಷ್ಟವಾಗಿ ಏನನ್ನೂ ಹೇಳಲಿಲ್ಲ. ಆದರೆ, ಅವರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಚಲಾಯಿಸಿರುವ ಸಾಧ್ಯತೆ ಇದೆ ಎಂಬ ಚರ್ಚೆ ಶಾಸಕರ ಮಧ್ಯೆ ನಡೆದಿದೆ. ಮತ ಚಲಾಯಿಸುವ ಮೊದಲು ಮಾತನಾಡಿದ್ದ ಸೋಮಶೇಖರ್, ‘ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಮಾಡಲು ಪ್ರಯತ್ನಿಸಿದ್ದೆ‌. ಆದರೆ ಅವರು ಕಾಲಾವಕಾಶ ನೀಡಲಿಲ್ಲ’ ಎಂದು ದೂರಿದರು. ‘ಅಭಿವೃದ್ಧಿಗೆ ಯಾರು ಅನುದಾನ ಕೊಡುತ್ತಾರೋ ಅವರಿಗೆ ಮತ ಹಾಕುತ್ತೇನೆ’ ಎಂದು ಸೋಮಶೇಖರ್ ಹೇಳಿದ್ದರು. ಇನ್ನೊಂದೆಡೆ ಬಿಜೆಪಿ ಶಾಸಕ ಶಿವರಾಮ್‌ ಹೆಬ್ಬಾರ್‌ ಕೂಡ ಮತದಾನಕ್ಕೆ ಗೈರಾಗಿದ್ದಾರೆ ಎಂದು ತಿಳಿದುಬಂದಿದೆ. ಇದರೊಂದಿಗೆ ಇಬ್ಬರ ಮೇಲೂ ಪಕ್ಷ ಶಿಸ್ತುಕ್ರಮ ಕೈಗೊಳ್ಳಲಿದೆ ಎಂಬ ಮಾತು ಪಕ್ಷದ ಪಡಸಾಲೆಯಲ್ಲಿ ಕೇಳಿಬಂದಿದೆ. ಪಕ್ಷ ಶಿಸ್ತುಕ್ರಮ ಕೈಗೊಳ್ಳುವ ಮುನ್ನವೇ ಇಬ್ಬರೂ ಪಕ್ಷಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತು ಶಾಸಕರ ವಲಯದಲ್ಲಿ ಕೇಳಿಬಂದಿದೆ.

ಸಂಜೆ 4ರ ವೇಳೆಗೆ ಒಟ್ಟು 222 ಶಾಸಕರು ಮತಚಲಾಯಿಸಿದ್ದಾರೆ. ಕಾಂಗ್ರೆಸ್‌ ಪಕ್ಷದ 134, ಬಿಜೆಪಿ 65, ಜೆಡಿಎಸ್‌ ನ 19, ಇಬ್ಬರು ಪಕ್ಷೇತರ ಶಾಸಕರು ಸೇರಿದಂತೆ ಸರ್ವೋದಯ ಕರ್ನಾಟಕ ಪಕ್ಷ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ತಲಾ ಒಬ್ಬರು ಮತಚಲಾಯಿಸಿದ್ದಾರೆ.

LEAVE A REPLY

Please enter your comment!
Please enter your name here