ಬಹುನಿರೀಕ್ಷಿತ ಜಾತಿ ಗಣತಿ ವರದಿ-ನಾಳೆ ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಸಾಧ್ಯತೆ?

ಮಂಗಳೂರು(ಬೆಂಗಳೂರು): ಜಾತಿಗಣತಿ ವರದಿ ವಿಚಾರವಾಗಿ ಇಂದು ಸಿಎಂ ಸಿದ್ದರಾಮಯ್ಯರನ್ನು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಭೇಟಿಯಾಗಲಿದ್ದು, ನಾಳೆ ರಾಜ್ಯ ಸರಕಾರಕ್ಕೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದಿಂದ ಬೆಳಗ್ಗೆ 11 ಗಂಟೆಗೆ ವರದಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ಸಮಿತಿ ಸಿದ್ಧಪಡಿಸಿರುವ ಜಾತಿಗಣತಿ ವರದಿ ಬಗ್ಗೆ ಸಾಕಷ್ಟು ಅಪಸ್ವರಗಳು ಕೇಳಿಬಂದಿದ್ದವು. ಬಳಿಕ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್​ ಹೆಗ್ಡೆ ಅವರು ಸರ್ಕಾರಕ್ಕೆ ಜಾತಿಗಣತಿ ವರದಿ ನೀಡಲು ಮುಂದಾಗಿದ್ದರು.ಕಾಂತರಾಜು ಅವರ ಜಾತಿಗಣತಿ ವರದಿ ಸ್ವೀಕಾರ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಜೊತೆಗೆ ಜಾತಿಗಣತಿ ವರದಿಯಲ್ಲಿ ಲೋಪವಿದ್ದರೆ ತಜ್ಞರ ಸಲಹೆ ಪಡೆಯುವುದಾಗಿ ಮತ್ತು ಸಂಪುಟದಲ್ಲಿ ತೀರ್ಮಾನ ಮಾಡುವುದಾಗಿ ಸಿಎಂ ಹೇಳಿದ್ದರು. ಈ ಹಿಂದೆ ಜಾತಿಗಣತಿ ವರದಿ ವಿರೋಧಿಸಿ ಒಕ್ಕಲಿಗ ಸಮುದಾಯದ ಮನವಿ ಪತ್ರಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಸಹಿ ಮಾಡಿದ್ದರು. ಆದರೆ ಇತ್ತೀಚೆಗೆ ಅಹಿಂದ ಸಮಾವೇಶದಲ್ಲಿ ಮಾತನಾಡಿದ್ದ ಡಿಕೆ ಶಿವಕುಮಾರ್​ ರಾಹುಲ್ ಗಾಂಧಿ ಜಾತಿಗಣತಿ ಆಗಬೇಕು ಎಂದಿದ್ದಾರೆ, ಇದಕ್ಕೆ ಕಾಂಗ್ರೆಸ್ ಬದ್ಧವಾಗಿದೆ ಎಂದು ಹೇಳಿದ್ದರು.

ಜಾತಿ ಗಣತಿ ವರದಿ ಬಿಡುಗಡೆಗೆ ಪರ-ವಿರೋಧ ವ್ಯಕ್ತವಾಗಿತ್ತು. ಕಾಂತರಾಜು ವರದಿಯನ್ನು ಒಕ್ಕಲಿಗ ಸಮುದಾಯದ ನಾಯಕರು ವಿರೋಧಿಸಿದ್ದರು. ಇತ್ತೀಚೆಗೆ ನಡೆದ ಸಭೆಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ, ನಂಜಾವಧೂತಶ್ರೀ ನೇತೃತ್ವದಲ್ಲಿ ಈ ಕುರಿತು ಚರ್ಚಿಸಲು ಸಭೆ ನಡೆಸಲಾಗಿತ್ತು. ಡಿಸಿಎಂ ಡಿ.ಕೆ.ಶಿವಕುಮಾರ್, ಕೃಷಿ ಸಚಿವ ಚಲುವರಾಯಸ್ವಾಮಿ, ಶಾಸಕರಾದ ಅಶ್ವತ್ಥ್ ನಾರಾಯಣ್, ಶರತ್ ಬಚ್ಚೇಗೌಡ, ಎಂ.ಕೃಷ್ಣಪ್ಪ, S.T.ಸೋಮಶೇಖರ್, ಆರಗ ಜ್ಞಾನೇಂದ್ರ ಹಾಗೂ ಒಕ್ಕಲಿಗ ಸಂಘದ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here