ಸಿದ್ದರಾಮಯ್ಯ ಸರಕಾರದ ವಿರುದ್ಧ‌ ಸಂಸದ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ – ನೀವು ಈ ರಾಜ್ಯಕ್ಕೆ ಬಾಂಬ್ ಕೊಟ್ಟವರು ಅದಕ್ಕೆ ನಿಮಗೆ ಚೊಂಬು – ಕುಹಕವಾಡಿದ ಕಟೀಲ್‌

ಮಂಗಳೂರು: ಸಿದ್ದರಾಮಯ್ಯ ಸರಕಾರ ಬಂದ ಮೇಲೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ್ರೆ, ಆತಂಕವಾದ ತಾಂಡವವಾಡುತ್ತೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಟೀಲ್‌, ವಿಧಾನಸೌಧದಲ್ಲೂ ಪಾಕಿಸ್ತಾನ ಜಿಂದಾಬಾದ್ ಮೊಳಗಿತು. ಹಿಂದೂಗಳ ಮೇಲೆ ಅತೀ ಹೆಚ್ಚು ಹಲ್ಲೆ, ಹತ್ಯೆ ಆರಂಭವಾಗಿದೆ. ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ಮಗಳ ಹತ್ಯೆ ನಡೆದಿದೆ. ಹತ್ಯೆಯ ಹಿನ್ನಲೆಯನ್ನು ತನಿಖೆ ಮಾಡುವ ಮೊದಲೇ ಸಿದ್ದರಾಮಯ್ಯ ಹಗುರವಾಗಿರುವ ಹೇಳಿಕೆ ಕೊಡ್ತಾರೆ. ಇದು ಸಿದ್ದರಾಮಯ್ಯನವರ ಇವತ್ತು ನಿನ್ನೆಯ ಶೈಲಿಯಲ್ಲ. ಮಂಗಳೂರಲ್ಲಿ ಕುಕ್ಕರ್ ಬಾಂಬ್ ಸ್ಫೋಟವಾದಾಗ ಡಿಕೆ ಶಿವಕುಮಾರ್ ಇದೆ ರೀತಿ ಹೇಳಿಕೆ ನೀಡಿದ್ರು. ತನಿಖೆಯಲ್ಲಿ ಸಾಬೀತಾದ ಬಳಿಕ ವಿಷಾಯಂತರ ಮಾಡಿದ್ರು. ಕೃತ್ಯಗಳ ಹಿಂದಿನ ತನಿಖೆ ಮಾಡುವ ಬದಲು ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ ಎಂದು ಕಟೀಲ್‌ ಕಿಡಿಕಾರಿದರು.

ಡಿಜೆ ಹಳ್ಳಿ, ಕೆಜಿ ಹಳ್ಳಿ, ರಾಮೇಶ್ವರಂ ಕೆಫೆ ಬ್ಲಾಸ್ಟ್ ಆದಾಗ ತಿರುಚುವ ಕೆಲಸ ಮಾಡಲಾಗಿತ್ತು. ಅಖಂಡ ಶ್ರೀನಿವಾಸ್ ಮೂರ್ತಿಯವರ ಮನೆ ಮೇಲೆ ದಾಳಿ ನಡೆದಾಗ ಅವರ ಮನೆಗೆ ಯಾವುದೇ ಕಾಂಗ್ರೆಸ್ ಮುಖಂಡರು ಹೋಗಿಲ್ಲ. ಅವರದ್ದೇ ಪಕ್ಷದ ಕಾರ್ಪೋರೇಟರ್ ಮಗಳು ನೇಹಾ ಹತ್ಯೆಯಾಗಿದೆ. ಆದರೆ ಮನೆಗೆ ಹೋಗಿ ಸಾಂತ್ವನ ಹೇಳುವ ಕೆಲಸವನ್ನು ಮಾಡಿಲ್ಲ. ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸುವುದಾಗಿ ಕಟೀಲ್‌ ಹೇಳಿದ್ದಾರೆ.

ಶಿವಮೊಗ್ಗ ಹರ್ಷ ಹತ್ಯೆಯಾದಾಗ, ಪ್ರವೀಣ್ ನೆಟ್ಟಾರ್ ಹತ್ಯೆಯಾದಾಗ ನಮ್ಮ ಸರಕಾರ ಇತ್ತು. ತಕ್ಷಣ ಪರಿಹಾರ ನೀಡುವ ಕೆಲಸ ಮಾಡಿದ್ದೇವೆ. ಕಾಂಗ್ರೆಸ್ ಜೊತೆ ಎಸ್ ಡಿ ಪಿ ಐ ಒಳ ಸಂಬಂಧ ಇರಿಸಿಕೊಂಡಿದೆ. ಪಿ ಎಫ್ ಐ ನಿಷೇಧದಿಂದಾಗಿ ಹತ್ಯೆಗಳು ನಿಯಂತ್ರಣಕ್ಕೆ ಬಂದಿತ್ತು. ಸಿದ್ದರಾಮಯ್ಯ ಸರಕಾರದ ತುಷ್ಠೀಕರಣದಿಂದ ಮತ್ತೆ ಇಂತಹ ಹತ್ಯೆಗಳು ಜಾಸ್ತಿಯಾಗುತ್ತಿದೆ. ತುಷ್ಠೀಕರಣ ನೀತಿಯಿಂದಾಗಿ ಇಲ್ಲಿನ ಬಹುಸಂಖ್ಯಾತ ಹಿಂದುಗಳಿಗೆ ಬದುಕು ಕಷ್ಟವಾಗಿದೆ. ಹತ್ಯೆಯಾದ್ರೆ ಕಾಂಗ್ರೆಸ್ ತನಿಖೆಯನ್ನು ಮಾಡುತ್ತಾ ಇಲ್ಲ. ಎನ್ ಐ ಎ ಸಕ್ರಿಯವಾಗಿರೋದ್ರಿಂದ ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ತನಿಖೆಯಾಗಿದೆ. ಕಾಂಗ್ರೆಸ್ ಇದ್ದಿದ್ರೆ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ ಹಳ್ಳ ಹಿಡಿಯುತ್ತಿತ್ತು. ನೇಹಾ ಕುಟುಂಬದವರಿಗೂ ಪರಿಹಾರ ನೀಡುವ ಕೆಲಸ ಮಾಡಬೇಕು. ಕಾಂಗ್ರೆಸ್ ಕೈ ಗೆ ಚೊಂಬು, ನೀವು ಈ ರಾಜ್ಯಕ್ಕೆ ಬಾಂಬ್ ಕೊಟ್ಟವರು ಅದಕ್ಕೆ ನಿಮಗೆ ಚೊಂಬು ಎಂದು ಕುಹಕವಾಡಿದ ಕಟೀಲ್‌ ನಮ್ಮ ಶಾಸಕರಿಗೆ ಕೊಟ್ಟ ಅನುದಾನ ಎಷ್ಟು ಎಂದು  ಬಹಿರಂಗ ಪಡಿಸುವಂತೆ ಆಗ್ರಹಿಸಿದರು.

ಕಾಂಗ್ರೆಸ್‌  ಪಕ್ಷದ ಶಾಸಕನ ನಿಧಿಯೇ ಕೊಟ್ಟಿಲ್ಲ. ಗ್ಯಾರಂಟಿಯನ್ನು ಸಮರ್ಪಕವಾಗಿ ನೀಡುತ್ತಿಲ್ಲ. ಮುಂದಿನ ಒಂದು ವರ್ಷದಲ್ಲಿ ಕರ್ನಾಟಕ ದಿವಾಳಿಯಾಗಲಿದೆ. ಕೇರಳ ರಾಜ್ಯ ದಿವಾಳಿಯಾದ ಹಾಗೆ ಕರ್ನಾಟಕವೂ ದಿವಾಳಿಯಾಗುತ್ತದೆ. ಇದು  80% ಸರಕಾರ, ಇದನ್ನು ಗುತ್ತಿಗೆದಾರರೇ ಹೇಳುತ್ತಿದ್ದಾರೆ ಎಂದು ಕಟೀಲ್‌ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಲೋಕಸಭಾ ಅಭ್ಯರ್ಥಿ ಕ್ಯಾ.ಬ್ರಿಜೇಶ್‌ ಚೌಟ, ಗಣೇಶ್‌ ಕಾರ್ಣಿಕ್‌ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here