ಮಂಗಳೂರು: ಅಭ್ಯರ್ಥಿ ಪಡೆದಿರುವುದಕ್ಕಿಂತ ಹೆಚ್ಚು ಮತಗಳು ನೋಟಾಗೆ ಚಲಾವಣೆಯಾದರೆ, ಅಂತಹ ಕ್ಷೇತ್ರಗಳ ಚುನಾವಣೆಯನ್ನು ‘ಅನೂರ್ಜಿತ’ ಎಂದು ಘೋಷಿಸಿ, ಮರು ಮತದಾನ ನಡೆಸಲು ನಿರ್ದೇಶನ ನೀಡುವಂತೆ ಕೋರಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ(ಏ.26) ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.
ನೋಟಾಗಿಂತ ಕಡಿಮೆ ಮತ ಪಡೆದ ಅಭ್ಯರ್ಥಿ ಮತ್ತೆ ಚುನಾವಣೆಗೆ ಸ್ಪರ್ಧಿಸುವುದಕ್ಕೆ ನಿರ್ಬಂಧ ಹೇರಬೇಕು. ನೋಟಾವನ್ನು “ಕಾಲ್ಪನಿಕ ಅಭ್ಯರ್ಥಿ” ಎಂದು ಸರಿಯಾಗಿ ಪ್ರಚಾರ ಮಾಡಬೇಕು. ಈ ನಿಟ್ಟಿನಲ್ಲಿ ಸೂಕ್ತ ನಿಯಮಗಳನ್ನು ರೂಪಿಸಲು ಭಾರತೀಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರ ಶಿವ ಖೇರಾ ಕೋರಿದ್ದಾರೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು, ಅರ್ಜಿಯ ವಿಚಾರಣೆಗೆ ಒಪ್ಪಿಕೊಂಡಿದೆ.
ಈಗಿರುವ ನಿಯಮಗಳ ಪ್ರಕಾರ ಅಭ್ಯರ್ಥಿಗಿಂತ ಹೆಚ್ಚು ಮತಗಳು ನೋಟಾಗೆ ಚಲಾವಣೆಯಾದರೆ, ನೋಟಾದ ಬಳಿಕ ಹೆಚ್ಚು ಮತಗಳನ್ನು ಪಡೆದ ಅಭ್ಯರ್ಥಿಯನ್ನೇ ವಿಜೇತ ಎಂದು ಘೋಷಿಸಲಾಗ್ತಿದೆ. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣ್ ಅವರು, ಸೂರತ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡು ಇತರೆ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದ ಕಾರಣ ಯಾವುದೇ ಚುನಾವಣೆಯಿಲ್ಲದೆ ಬಿಜೆಪಿ ಅಭ್ಯರ್ಥಿ ವಿಜಯಿ ಎಂದು ಘೋಷಿಸಿದ ಇತ್ತೀಚಿನ ಉದಾಹರಣೆಯನ್ನು ನ್ಯಾಯಾಲಯದ ಮುಂದೆ ಉಲ್ಲೇಖಿಸಿದ್ದಾರೆ.
ಒಬ್ಬರೇ ಅಭ್ಯರ್ಥಿ ಇದ್ದರೂ, ಮತದಾರರಿಗೆ ನೋಟಾಕ್ಕೆ ಮತ ಹಾಕುವ ಅವಕಾಶವಿರುವುದರಿಂದ ಚುನಾವಣೆ ನಡೆಯಬೇಕು. ಅವಿರೋಧ ಆಯ್ಕೆ ಎಂಬುವುದು ಪ್ರತಿಸ್ಪರ್ಧಿ ಇಲ್ಲ ಎಂಬ ಕಾರಣಕ್ಕೆ ಯಾರೇ ಅಭ್ಯರ್ಥಿಯಾದರೂ ಅವರು ಒಪ್ಪಿಕೊಳ್ಳುವಂತೆ ಮತದಾರರನ್ನು ಬಲವಂತಪಡಿಸುವುದಾಗಿದೆ ಎಂದು ವಕೀಲ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದ ಕಾನೂನನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಅರ್ಜಿದಾರರು ಬಯಸುತ್ತಿರುವುದನ್ನು ಗಮನಿಸಿದ ಸಿಜೆಐ ಚಂದ್ರಚೂಡ್ ಅವರು ಈ ವಿಷಯವನ್ನು ಪರಿಗಣಿಸಲು ಒಪ್ಪಿಕೊಂಡಿದ್ದು, ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಲಾಗಿದೆ.