ಮಂಗಳೂರು: ಏರ್ಪೋರ್ಟ್ ನ ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಕಲ್ಪಿಸದ ಏರ್ಪೋರ್ಟ್ ಆಡಳಿತದ ವಿರುದ್ದ ಸ್ಥಳೀಯ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಮಂಗಳೂರು ಏರ್ಪೋರ್ಟ್ ಗೆ ಸಾಗುವ ಮುಖ್ಯ ದ್ವಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಏರ್ಪೋರ್ಟ್ ಗೆ ಯಾವುದೇ ವಾಹನ ತೆರಳದಂತೆ ತಡೆಯೊಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಸೂಕ್ತ ವ್ಯವಸ್ಥೆ ಕಲ್ಪಿಸದೆ ಮಳೆ ನೀರನ್ನು ಅವೈಜ್ಞಾನಿಕವಾಗಿ ಹೊರ ಬಿಡುತ್ತಿರುವ ಏರ್ಪೋರ್ಟ್ ಆಡಳಿತಯ ಮಂಡಳಿಯ ನಿಲುವಿನಿಂದಾಗಿ ಕೆಂಜಾರು ಹಾಗೂ ಏರ್ಪೋರ್ಟ್ ಸುತ್ತಮುತ್ತಲಿನ ಹಲವು ಮನೆ ನಿವಾಸಿಗಳಿಗೆ ಕೃತಕ ನೆರೆ ಭೀತಿಯ ಆತಂಕ ಎದುರಾಗಿದ್ದು ಟೇಬಲ್ ಟಾಪ್ ಏರ್ಪೋರ್ಟ್ ಆಗಿರುವ ಕಾರಣ ಕೆಲ ಭಾಗದ ಜನ ವಸತಿ ಪ್ರದೇಶಗಳಿಗೆ ನೀರು ನುಗ್ಗುವ ಭೀತಿಯಿದೆ. ಆದರೆ ಮಂಗಳೂರು ಏರ್ಪೋರ್ಟ್ ಆಡಳಿತ ಸಂಪೂರ್ಣ ನಿರ್ಲಕ್ಷ್ಯ ತೋರಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ರಸ್ತೆ ತಡೆ ನಡೆಸಿ ಪ್ರತಿಭಟನೆ ವಿಷಯ ತಿಳಿಯುತ್ತಲೇ ಬಜ್ಪೆ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಏರ್ಪೋರ್ಟ್ ರಸ್ತೆ ತಡೆದ ಹಿನ್ನೆಲೆ ಘಟನಾ ಸ್ಥಳದಲ್ಲಿ ಸಿ.ಐ.ಎಸ್.ಎಫ್ ಸಿಬ್ಬಂದಿ ಮೊಕ್ಕಾಂ ಹೂಡಿದ್ದಾರೆ. ಸದ್ಯ ಗ್ರಾಮಸ್ಥರ ಮನವೊಲಿಸಿರುವ ಪೊಲೀಸರು ರಸ್ತೆ ತಡೆ ತೆರವುಗೊಳಿಸಿದ್ದಾರೆ. ಇತ್ತ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವಂತೆ ಒಂದು ಗಂಟೆಯ ಗಡುವು ನೀಡಿದ್ದಾರೆ.