ಮಂಗಳೂರು (ಮುಂಬೈ ): ಇಂಡಿಯನ್ ಓವರ್ಸೀಸ್ ಬ್ಯಾಂಕ್ನಿಂದ 180 ಕೋಟಿ ರೂ ಸಾಲ ಪಡೆದು ಮರುಪಾವತಿಸದೇ ಬಾಕಿ ಉಳಿಸಿರುವ ಪ್ರಕರಣದಲ್ಲಿ ವಿಜಯ್ ಮಲ್ಯ ವಿರುದ್ಧ ಮುಂಬೈನ ವಿಶೇಷ ಸಿಬಿಐ ಕೋರ್ಟ್ವೊಂದು ಜಾಮೀನುರಹಿತ ವಾರಂಟ್ ಹೊರಡಿಸಿದೆ. ಸಿಬಿಐ ಕೋರ್ಟ್ ಜಡ್ಜ್ ಎಸ್.ಪಿ. ನಾಯ್ಕ್ ನಿಂಬಾಳ್ಕರ್ ಅವರು ಇತ್ತೀಚೆಗೆ ಈ ಆದೇಶ ಹೊರಡಿಸಿರುವುದು ತಿಳಿದುಬಂದಿದೆ. 68 ವರ್ಷದ ವಿಜಯ್ ಮಲ್ಯ ವಿರುದ್ಧ ಬೇರೆ ಬೇರೆ ಪ್ರಕರಣಗಳಲ್ಲಿ ಈ ಹಿಂದೆ ಜಾಮೀನುರಹಿತ ವಾರಂಟ್ಗಳನ್ನು ಹೊರಡಿಸಲಾಗಿದೆ. ಮುಂಬೈನ ಸಿಬಿಐ ಕೋರ್ಟ್ ಈ ಹಿನ್ನೆಲೆಯಲ್ಲಿ ಓಪನ್ ಎಂಡೆಡ್ ವಾರಂಟ್ ಹೊರಡಿಸಿದೆ.
ಬ್ಯಾಂಕ್ ನ್ನು ವಂಚಿಸಿದ ಆರೋಪ ವಿಜಯ್ ಮಲ್ಯ ಮೇಲೆ…
ಸದ್ಯ ಲಂಡನ್ನಲ್ಲಿರುವ ವಿಜಯ್ ಮಲ್ಯ ಕಿಂಗ್ಫಿಶರ್ ಏರ್ಲೈನ್ಸ್ ಮಾಲೀಕರಾಗಿದ್ದಾಗ ಇಂಡಿಯನ್ ಓವರ್ಸೀಸ್ ಬ್ಯಾಂಕ್ನಿಂದ ಪಡೆದ ಸಾಲವನ್ನು ತೀರಿಸಲಿಲ್ಲ. ಇದರಿಂದ ಬ್ಯಾಂಕ್ಗೆ 180 ಕೋಟಿ ರೂ.ಗೂ ಹೆಚ್ಚು ನಷ್ಟ ಉಂಟು ಮಾಡಿದ್ದರು ಎಂದು ಮಲ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಆರೋಪಿಸಿದೆ. ಐಒಬಿ ಬ್ಯಾಂಕ್ 2007ರಿಂದ 2012ರ ನಡುವೆ ಕಿಂಗ್ಫಿಶರ್ ಏರ್ಲೈನ್ಸ್ಗೆ ವಿವಿಧ ಸಂದರ್ಭಗಳಲ್ಲಿ ಬೃಹತ್ ಪ್ರಮಾಣದಲ್ಲಿ ಸಾಲಗಳನ್ನು ನೀಡಿತ್ತು. ಆ ಸಾಲವನ್ನು ಕಿಂಗ್ಫಿಶರ್ ಏರ್ಲೈನ್ಸ್ನ ಪ್ರೊಮೋಟರ್ ಆದ ವಿಜಯ್ ಮಲ್ಯ ಬೇರೆ ಬೇರೆ ಕಡೆಗೆ ವರ್ಗಾವಣೆ ಮಾಡಿದ್ದರೆಂದು ಸಿಬಿಐ ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ತಿಳಿಸಲಾಗಿದೆ. ವಿಜಯ್ ಮಲ್ಯ ಇಂಡಿಯನ್ ಓವರ್ಸೀಸ್ ಬ್ಯಾಂಕ್ಗೆ ಮಾತ್ರವಲ್ಲ ಎಸ್ಬಿಐ ಹಾಗೂ ಇತರ ಹಲವು ಬ್ಯಾಂಕ್ಗಳಿಂದಲೂ ಸಾಲ ಪಡೆದು ಮರುಪಾವತಿಸದೇ ವಂಚಿಸಿರುವ ಆರೋಪ ಇದೆ ಎಂದು ತಿಳಿದು ಬಂದಿದೆ.