ಕಾಫಿ ಔಟ್‌ಲೆಟ್‌ನ ಮಹಿಳಾ ವಾಶ್‌ರೂಮ್‌ನ ಕಸದ ಬುಟ್ಟಿಯಲ್ಲಿ ಕಳ್ಳ ಕ್ಯಾಮರಾ – ಆರೋಪಿ ಬಂಧನ

ಮಂಗಳೂರು (ಬೆಂಗಳೂರು): ಬೆಂಗಳೂರಿನ ಪ್ರತಿಷ್ಠಿತ ಥರ್ಡ್‌ ವೇವ್‌ ಕಾಫಿ ಔಟ್‌ಲೆಟ್‌ನ ಮಹಿಳೆಯರ ಶೌಚಾಲಯದಲ್ಲಿ ಕಳ್ಳ ಕ್ಯಾಮರಾ ಇರಿಸಿದ್ದು, ಕಾಫಿ ಶಾಪ್‌ ನ ಸಿಬ್ಬಂದಿಯೊಬ್ಬನನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಶಿವಮೊಗ್ಗ ಮೂಲದ ಮನೋಜ್‌ (23) ಎಂದು ಗುರುತಿಸಲಾಗಿದ್ದು, ಈತ ಕಾಫಿ ಶಾಪ್‌ ನಲ್ಲಿ ಕಾಫಿ ಮೇಕರ್‌ ಆಗಿ ಕೆಲಸ ಮಾಡುತ್ತಿದ್ದ.

ಮಹಿಳೆಯೊಬ್ಬರಿಗೆ ಶೌಚಾಲಯದಲ್ಲಿರುವ ಕಸದ ಬುಟ್ಟಿಯಲ್ಲಿ ವೀಡಿಯೋ ರೆಕಾರ್ಡ್ ಆನ್ ಆಗಿರುವ ಸ್ಥಿತಿಯಲ್ಲಿ ಫೋನ್ ಪತ್ತೆಯಾಗಿದೆ.ಥರ್ಡ್ ವೇವ್ ಕಾಫಿ ಶಾಪ್‌ ಸಿಬ್ಬಂದಿ ಮನೋಜ್ ಫೋನ್ ಇದಾಗಿದ್ದು, ಮಹಿಳೆಯರ ಶೌಚಾಲಯಕ್ಕೆ ಬೆಳಗ್ಗೆ ಹೋಗಿದ್ದ ಈತ ರಹಸ್ಯವಾಗಿ ವೀಡಿಯೋ ಮಾಡುವುದಕ್ಕಾಗಿ ಫೋನ್ ನನ್ನು ಇರಿಸಿದ್ದ ಎನ್ನಲಾಗಿದೆ. ಶೌಚಾಲಯಕ್ಕೆ ಹೋಗಿದ್ದ ಮಹಿಳೆಯೊಬ್ಬರ ಕಣ್ಣಿಗೆ ಈ ಫೋನ್ ಬಿದ್ದಿದ್ದು, ಅವರು ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಆರೋಪಿ ಮನೋಜ್‌ ನನ್ನು ಬಂಧಿಸಿದ್ದಾರೆ. ಮಹಿಳೆಯ ಕಣ್ಣಿಗೆ ಫೋನ್ ಬಿದ್ದ ವೇಳೆ ಎರಡು ಗಂಟೆಗಳಿಂದ ಈ ಫೋನ್‌ನಲ್ಲಿ ರೆಕಾರ್ಡಿಂಗ್ ಆನ್ ಆದ ಸ್ಥಿತಿಯಲ್ಲಿ ಇತ್ತು ಎಂದು ವರದಿ ಆಗಿದೆ.

LEAVE A REPLY

Please enter your comment!
Please enter your name here