ಮಂಗಳೂರು (ಬೆಂಗಳೂರು): ಹೆಸರು ನರಸಿಂಹ ರೆಡ್ಡಿ. ಉದ್ಯೋಗ ಕಳ್ಳತನ. ಇವನೆಂಥಾ ಐನಾತಿ ಕಳ್ಳ ಅಂದ್ರೆ ಇವನನ್ನು ಹಿಡಿಯಲು ಪೊಲೀಸರು ಪಡಬಾರದ ಕಷ್ಟ ಪಡುತ್ತಿದ್ದರು. ಆದರೆ ಹಿಡಿಯಲು ಮಾತ್ರ ಆಗುತ್ತಿರಲಿಲ್ಲ. ಯಾರೂ ಊಹಿಸದ ಜಾಗವನ್ನೇ ಈತ ತನ್ನ ಆವಾಸ ಸ್ಥಾನ ಮಾಡಿಕೊಂಡಿದ್ದೇ ಇದಕ್ಕೆ ಕಾರಣ.
ಊರೆಲ್ಲಾ ತಿರುಗಿ ನಗರದಲ್ಲಿರುವ ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ನರಸಿಂಹ ರೆಡ್ಡಿ, ಮನೆಯಲ್ಲಿ ಯಾರು ಇಲ್ಲದ ವೇಳೆ ಕನ್ನ ಹಾಕಿ ಕದ್ದ ಆಭರಣಗಳ ಸಮೇತ ಕಾಡಿಗೆ ಎಸ್ಕೇಪ್ ಆಗುತ್ತಿದ್ದ. ಬೆಂಗಳೂರಿನ ಹೊರ ವಲಯದಲ್ಲಿರುವ ಕಾಡುಗಳನ್ನ ತನ್ನ ಹೈಡ್ ಔಟ್ ಪ್ಲೇಸ್ ಮಾಡಿಕೊಂಡಿದ್ದ ಈ ಆಸಾಮಿ, ನೆಲಮಂಗಲ ಬಳಿಯ ಗುಡೇಮಾರನಹಳ್ಳಿ ಹಾಗೂ ಕೃಷ್ಣಗಿರಿ ಅರಣ್ಯದಲ್ಲಿ ವಾಸ ಮಾಡುತ್ತಿದ್ದ. ಬೆಳಗ್ಗಿನ ಹೊತ್ತು ಗಿಡ ಮರಗಳ ಕೆಳಗೆ ಆಶ್ರಯ ಪಡೆಯುತ್ತಿದ್ದ ರೆಡ್ಡಿ, ರಾತ್ರಿ ಹೊತ್ತು ಬಂಡೆಗಳನ್ನೇ ಬೆಡ್ ಮಾಡಿಕೊಂಡು ಹಾಯಾಗಿ ಮಲಗುತ್ತಿದ್ದ.
ಇದುವರೆಗೂ ಸುಮಾರು 50ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈ ಕಳ್ಳನನ್ನು ಹಿಡಿಯುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಈತ ಎಲ್ಲೆಲ್ಲಿ ಕಳ್ಳತನ ಮಾಡುತ್ತಿದ್ದನೋ ಆ ಜಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾದಲ್ಲಿ ಈತನ ಚಲವಲನ ಸೆರೆಯಾಗಿದ್ವು. ಇದನ್ನು ಬಳಸಿ ಜೊತೆಗೆ ಆತನ ಮೊಬೈಲ್ ನೆಟ್ವರ್ಕ್ ಸಿಗ್ನಲ್ ಆಧರಿಸಿ ಲೊಕೇಷನ್ ಪತ್ತೆಹಚ್ಚಿ ಫೀಲ್ಡಿಗಿಳಿದ ಗಿರಿನಗರ ಪೊಲೀಸರು ಗುಡೇಮಾರನಹಳ್ಳಿ ಕಾಡಿನಲ್ಲಿ ನರಸಿಂಹ ರೆಡ್ಡಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಸುಮಾರು 70 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.